ಐನ್ಸ್ಟೈನ್, ಆಲ್ಬರ್ಟ್: 1879-1955. ಸೈದ್ಧಾಂತಿಕ ಭೌತವಿಜ್ಞಾನಿ. ಭೌತವಿಜ್ಞಾನದ ಮೂಲಭಾವನೆ ಮತ್ತು ತತ್ತ್ವಗಳನ್ನು ಅನೇಕ ರೀತಿಯಲ್ಲಿ ಮಾರ್ಪಡಿಸಿ ವಿಜ್ಞಾನಿಗಳ ವೈಚಾರಿಕ ಮನೋದೃಷ್ಟಿಯನ್ನೆ ಬದಲಾಯಿಸಿದ ಯುಗಪುರುಷ; ಸಾಪೇಕ್ಷ ಸಿದ್ಧಾಂತದ (ಥಿಯೊರಿ ಆಫ್ ರಿಲೆಟಿವಿಟಿ) ಮಂಡನಕಾರ; ಪರಮಾಣುಶಕ್ತಿಯ ರಹಸ್ಯವನ್ನು ಶ್ರುತಪಡಿಸಿದಾತ; ಮಾನವಕಲ್ಯಾಣದಲ್ಲಿಯೂ ವಿಶ್ವಶಾಂತಿಯಲ್ಲಿಯೂ ಅಪಾರ ಆಸಕ್ತಿ ತಳೆದಿದ್ದ ಶಾಂತಿದೂತ. ಬುದ್ಧಿಶಕ್ತಿ, ಬಹುಮುಖ ಸಂಶೋಧನ ಸಾಮಥರ್ಯ್‌, ಮೂಲಭೂತ ಪ್ರಶ್ನೆಗಳ ಬಗ್ಗೆ ಆಸಕ್ತಿ 
ಹಾಗೂ ಚಿಂತನ ಶಕ್ತಿ-ಇವನ್ನೆಲ್ಲ ಗಮನಿಸಿದರೆ ಈತನನ್ನು 20ನೆಯ ಶತಮಾನದ ನ್ಯೂಟನ್ ಎನ್ನಬಹುದು.

 ಬಾಲ್ಯ 
1879 ಮಾರ್ಚ್ 14ರಂದು ಜರ್ಮನಿಯ ಸ್ಟೆಬಿಯಾ ಪ್ರಾಂತ್ಯದ ಉಲ್ಮ್‌ ಎಂಬ ಊರಿನಲ್ಲಿ ಐನ್ಸ್ಟೈನ್ ಹುಟ್ಟಿದ. ಮರುವರ್ಷವೇ ಆತನ ತಂದೆ ಜೀವನೋಪಾಯಕ್ಕಾಗಿ ಈ ಊರನ್ನು ಬಿಟ್ಟು ಮ್ಯೂನಿಚ್ ನಗರ ಸೇರಬೇಕಾಯಿತು. ಅಲ್ಲಿ ತನ್ನ ತಮ್ಮನ ಸಹಾಯದಿಂದ ಒಂದು ವಿದ್ಯುದ್ರಾಸಾಯನಿಕ ಕಾರ್ಖಾನೆಯನ್ನು ಸ್ಥಾಪಿಸಿ ಅದರ ಉತ್ಪನ್ನಗಳ ಮಾರಾಟದಿಂದ ಜೀವನಕ್ಕೆ ಬೇಕಾದ ಹಣವನ್ನು ಸಂಪಾದಿಸತೊಡಗಿದ. ಹಿರಿಯ ಐನ್ಸ್ಟೈನ್ ಜನ್ಮತಃ ಯೆಹೂದಿ; ಧರ್ಮಸಂಪ್ರದಾಯಗಳ ವಿಷಯದಲ್ಲಿ ಈತನದು ವಿಶಾಲ ಮನೋಭಾವ. ಹೀಗಾಗಿ ಮಗನನ್ನು ಮ್ಯೂನಿಚಿನ ಕೆಥೊಲಿಕ್ ಕ್ರೈಸ್ತ ಶಾಲೆಗೆ ಸೇರಿಸುವುದರಲ್ಲಿ ಆತನಿಗೆ ಏನೂ ಅಳುಕು ಇರಲಿಲ್ಲ. ಹತ್ತು ವರ್ಷ ತುಂಬುವ ವೇಳೆಗೆ ಈ ಅಣುಗನ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಯಿತು. ಮುಂದೆ ಅದೇ ನಗರದ ಜಿಮ್ನಾಸಿಯಂನಲ್ಲಿ (ಅಂದಿನ ವಿವಿಧೋದ್ದೇಶ ಶಾಲೆಗಳ ಹೆಸರು) ತನ್ನ ವ್ಯಾಸಂಗವನ್ನು ಮುಂದುವರಿಸಿದ. ಈ ಶಾಲೆಗಳಲ್ಲಿ ಅನುಸರಿಸುತ್ತಿದ್ದ ಪಠ್ಯಕ್ರಮ, ಬೋಧನವಿಷಯ ಐನ್ಸ್ಟೈನನಿಗೆ ಅಷ್ಟಾಗಿ ರುಚಿಸಲಿಲ್ಲ. ಕೆಲವು ವೇಳೆ ಬೇಸರವೇ ಆಗುತ್ತಿತ್ತು. ಆದ್ದರಿಂದ ಶಾಲೆಯಲ್ಲಿ ಇತರರಂತೆಯೇ ಅವನು ಸಾಧಾರಣ ವಿದ್ಯಾರ್ಥಿಯಾಗಿಯೇ ಉಳಿದ. ಆದರೆ ಸ್ವಭಾವತಃ ಈತ ಬಲು ಕುತೂಹಲಿ. ಸ್ವತಃ ಅನೇಕ ವಿಷಯಗಳನ್ನು ಅರಿಯಲು ಪ್ರಯತ್ನಪಟ್ಟ. ಇಲ್ಲಿ ಅವನಿಗೆ ವಿಶೇಷ ಸಹಕಾರ ದೊರೆತದ್ದು ಅವನ ಚಿಕ್ಕಪ್ಪನಿಂದ. ಗಣಿತವಿಜ್ಞಾನದ ವಿಭಾಗಗಳಾದ ಬೀಜರೇಖಾಗಣಿತ ಹಾಗೂ ಅವಕಲನಶಾಸ್ತ್ರಗಳನ್ನು ಈತನಿಂದ ಕಲಿತದ್ದು ಮಾತ್ರವಲ್ಲ, ಅವುಗಳಲ್ಲಿ ಸಾಕಷ್ಟು ಪ್ರೌಢಿಮೆಯನ್ನೂ ಸಹ ಐನ್ಸ್ಟೈನ್ ಗಳಿಸಿಕೊಂಡ. ವಿಜ್ಞಾನದ ವಿವಿಧ ವಿಭಾಗಗಳು, ಹಳೆಯ ಮತ ಗ್ರಂಥಗಳು, ಸಾಹಿತ್ಯ, ವಯೊಲಿನ್ ಇಲ್ಲೆಲ್ಲ ಈತನ ಬಲು ಚುರುಕಾದ ಮನಸ್ಸು ವ್ಯಾಪಕವಾಗಿ ಹರಿಯಿತು. ಮನಸ್ಸು ವ್ಯಾಕುಲಗೊಂಡಾಗ ಅದನ್ನು ಮರೆಯಲು ವಯೊಲಿನ್ ವಾದನದಲ್ಲಿ ತಲ್ಲೀನತೆ ಪಡೆಯುತ್ತಿದ್ದ.

 ವಿದ್ಯೆ 
1894ರಲ್ಲಿ ಐನ್ಸ್ಟೈನನ ತಂದೆತಾಯಿಯರು ಮ್ಯೂನಿಚ್ ನಗರವನ್ನು ತೊರೆದು ಇಟಲಿ ದೇಶದ ಮಿಲಾನ್ ನಗರವನ್ನು ಸೇರಿದರು. ಕಿರಿಯ ಐನ್ಸ್ಟೈನ್ ವಿದ್ಯಾಭ್ಯಾಸದ ಪ್ರಯುಕ್ತ ಮ್ಯೂನಿಚಿನಲ್ಲಿಯೇ ಉಳಿಯಬೇಕಾಯಿತು. ಆದರೆ ಈ ಏರ್ಪಾಡು ಬಲುಕಾಲ ಸುಗಮವಾಗಿ ಸಾಗಲಿಲ್ಲ. ಉಳಿದಿದ್ದ ಮಾರ್ಗ ಒಂದೇ-ಜೂ಼ರಿಕ್ ನಗರದ ಸ್ವಿಸ್ ಪಾಲಿಟೆಕ್ನಿಕನ್ನು ಸೇರುವುದು. ಇವನಿಗಾಗ 15 ವರ್ಷ ಪ್ರಾಯ. ಈತ ಗಣಿತವಿಜ್ಞಾನದಲ್ಲಿ ಮಾತ್ರ ಅಸಾಮಾನ್ಯ ವಿದ್ವತ್ತು ಗಳಿಸಿದ್ದ. ನಿಜ; ಆದರೆ ಇತರ ವಿಷಯಗಳಲ್ಲಿ ಸಾಕಷ್ಟು ಪರಿಣತನಾಗಿರ ದಿದ್ದುದರಿಂದ 
ಸ್ವಿರ್ಸ್ ಪಾಲಿಟೆಕ್ನಿಕನ್ನು ಸೇರಲು ಮಾಡಿದ ಪ್ರಥಮ ಪ್ರಯತ್ನ ಸಫಲವಾಗಲಿಲ್ಲ. ಮುಂದಿನ ವರ್ಷ (1896) ಇಲ್ಲಿ ಜಯ ಸಿದ್ಧಿಸಿತು. ಪಾಲಿಟೆಕ್ನಿನಲ್ಲಿ ಗಣಿತ ಹಾಗೂ ಭೌತ ವಿಜ್ಞಾನಗಳನ್ನು ಐಚ್ಛಿಕ ವಿಷಯಗಳಾಗಿ ಆರಿಸಿಕೊಂಡ.

ವಿದ್ಯಾಸಂಸ್ಥೆಯೇನೋ ಬದಲಾಯಿತು; ಆದರೆ ಹಾಡು ಹಿಂದಿನದೇ-ಬೋಧನ ವಿಷಯ ಗಳಲ್ಲಿ ಹಿರಿಮೆ ಇರಲಿಲ್ಲ, ಬೋಧನ ವಿಧಾನದಲ್ಲಿ ರಸವಿರಲಿಲ್ಲ. ಸಾಕಷ್ಟು ವಿರಾಮ ಲಭಿಸುತ್ತಿದ್ದುದೊಂದು ಅನುಕೂಲ. ಇದರಿಂದ ಸ್ವತಂತ್ರ ವ್ಯಾಸಂಗ ಮತ್ತು ಚಿಂತನೆಗಳಿಗೆ ಧಾರಾಳವಾದ ಅವಕಾಶ ದೊರೆಯಿತು. ಬೋಲ್ಟ್‌್ಸಮನ್, ಮ್ಯಾಕ್ಸ್‌ವೆಲ್, ಹೆಲ್ಮ್‌ಹೊಲ್ಟ್‌್ಸ, ಹಟ್ರ್ಸ್‌ ಮುಂತಾದ ಉದ್ಧಾಮ ವಿಜ್ಞಾನಿಗಳ ಗ್ರಂಥಗಳನ್ನೂ ಸಂಶೋಧನ ಲೇಖನಗಳನ್ನೂ ವಿದ್ಯಾರ್ಥಿ ಐನ್ಸ್ಟೈನ್ ಸ್ವತಂತ್ರವಾಗಿ ಅಭ್ಯಸಿಸಿ ಗಹನಪಾಂಡಿತ್ಯ ಸಂಪಾದಿಸಿದ. 
ಮ್ಯಾಕ್ಸ್‌ವೆಲ್ಲನ ಕ್ಷೇತ್ರ ಸಿದ್ಧಾಂತ ಇವನ ಮನಸ್ಸನ್ನು ವಿಶೇಷವಾಗಿ ಆಕರ್ಷಿಸಿದ್ದು ಮಾತ್ರವಲ್ಲ, ಭೌತಶಾಸ್ತ್ರದ ಸಿದ್ಧಾಂತಗಳ ಬಗ್ಗೆ ಈತನ ದೃಷ್ಟಿಕೋನವನ್ನೇ ಬದಲಾಯಿಸಿತು. ಮ್ಯಾಕ್ಸ್‌ವೆಲ್ ತನ್ನ ಸಿದ್ಧಾಂತದಲ್ಲಿ ಕ್ಷೇತ್ರದ ಭಾವನೆಗೆ ಆದ್ಯತೆ ನೀಡಿದ್ದನಲ್ಲದೆ ಅದರ ಆಧಾರದ ಮೇಲೆ ಎಲ್ಲ ಕ್ರಿಯೆಗಳನ್ನೂ ವಿವರಿಸುವ ಪ್ರಯತ್ನ ಮಾಡಿದ್ದ. ಆ ದಿವಸಗಳಲ್ಲಿ ಐನ್ಸ್ಟೈನನಿಗೆ ವಿಖ್ಯಾತ ಗಣಿತವಿಜ್ಞಾನಿ ಮಿಂಕೊವಿಸ್ಕಿಯ ಪರಿಚಯ ಲಾಭವಾಯಿತು. ಈತ ಮುಂದೆ ವಿಶಿಷ್ಟ ಸಾಪೇಕ್ಷ ಸಿದ್ಧಾಂತಕ್ಕೆ (ಸ್ಪೆಷಲ್ ಥಿಯೊರಿ ಆಫ್ ರಿಲೆಟಿವಿಟಿ) ಒಂದು ಪರ್ಯಾಯ ವ್ಯಾಖ್ಯೆಯನ್ನೇ ನೀಡಿದ ಮಹಾಮೇಧಾವಿ. 

 ಉದ್ಯೋಗ 
ಪಾಲಿಟೆಕ್ನಿಕ್ ವ್ಯಾಸಂಗ ಮುಗಿಯುವಾಗ ಐನ್ಸ್ಟೈನನ ಪ್ರಾಯ ಇಪ್ಪತ್ತು ವರ್ಷ. ಮುಂದೆ ಜೀವನ ನಿರ್ವಹಣೆ ನಡೆಯಲು ಸಂಪಾದನೆ ಅಗತ್ಯವಾಗಿತ್ತು. ಸ್ವಲ್ಪ ಕಾಲ ಉಪಾಧ್ಯಾಯ ವೃತ್ತಿಯನ್ನು ಹಿಡಿದ. 1902ರಲ್ಲಿ ಬರ್ನ್ ಪಟ್ಟಣದಲ್ಲಿ ಏಕಸ್ವ ಕಚೇರಿಯಲ್ಲಿ (ಪೇಟೆಂಟ್ ಆಫೀಸ್) ಏಕಸ್ವ ಪರೀಕ್ಷಕನಾಗಿ ನೇಮಕಗೊಂಡ. ಅಲ್ಲಿ ವಿಶೇಷ ಕೆಲಸವಿಲ್ಲದಿದ್ದುದರಿಂದ ಐನ್ಸ್ಟೈನನಿಗೆ ತನ್ನ ವ್ಯಾಸಂಗವನ್ನು ಯಾವ ಅಡಚಣೆಯೂ ಇಲ್ಲದೆ ಮುಂದುವರಿಸಲು ಅನುಕೂಲವಾಯಿತು.

ಇದೇ ವೇಳೆಗೆ ಆ ಮೊದಲು ಜೂ಼ರಿಕ್ ಪಾಲಿಟೆಕ್ನಿಕಿನಲ್ಲಿ ತನ್ನ ಸಹಪಾಠಿಯಾಗಿದ್ದ ಮಿಲೇವಮ್ಯೂಟ್ರಿಷ್ ಎಂಬಾಕೆಯನ್ನು ಮದುವೆಯಾದ. ಆಕೆಯೂ ಭೌತವಿಜ್ಞಾನದಲ್ಲಿ ಆಸಕ್ತಳಾಗಿದ್ದುದೇ ಮದುವೆಗೆ ಮುಖ್ಯ ಕಾರಣ. ಈ ದಂಪತಿಗಳಿಗೆ ಇಬ್ಬರು ಗಂಡು ಮಕ್ಕಳು ಹುಟ್ಟಿದರು. ಆದರೆ ದಾಂಪತ್ಯಜೀವನ ಮೊದಲು ನಿರೀಕ್ಷಿಸಿದಷ್ಟು ತೃಪ್ತಿಕರವಾಗಿ ಸಾಗಲಿಲ್ಲ. ಗಂಡಹೆಂಡಿರ ಮನೋದೃಷ್ಟಿ ಅನೇಕ ರೀತಿಯಲ್ಲಿ ಸರಿ ಹೊಂದದೆ ಕಾಲಕ್ರಮೇಣ ಸಂಸಾರದಲ್ಲಿ ಅಹಿತ ವಾತಾವರಣವೇರ್ಪಟ್ಟಿತು. ಆದರೆ ಐನ್ಸ್ಟೈನ್ ತನ್ನ ಸಂಶೋಧನ ಕಾರ್ಯಗಳಲ್ಲಿಯೇ ನಿರತನಾಗಿ ಇದನ್ನು ಮರೆಯುತ್ತಿದ್ದ.

 ಸಾಪೇಕ್ಷವಾದ 
ದಿನಗಳು ಕಳೆದಂತೆ ಐನ್ಸ್ಟೈನ್ನ ಸಂಶೋಧನೆ ಮತ್ತು ಚಿಂತನೆ ಹೆಚ್ಚು ಹೆಚ್ಚು ಭರದಿಂದ ಮುಂದುವರಿದುವು. 1905ರಲ್ಲಿ ಮಹತ್ತ್ವಪುರಿತವಾದ ನಾಲ್ಕು ಸಂಶೋಧನ ಲೇಖನಗಳನ್ನು ಪ್ರಕಟಿಸಿದ. ಇವುಗಳಲ್ಲಿ ಎರಡು ವಿಶಿಷ್ಟ ಸಾಪೇಕ್ಷ ಸಿದ್ಧಾಂತಕ್ಕೆ ಸಂಬಂಧಿಸಿದವು; ಉಳಿದೆರಡು ಕ್ರಮವಾಗಿ ಬ್ರೌನಿಯನ್ ಚಲನೆ ಮತ್ತು ದ್ಯುತಿವಿದ್ಯುತ್ಕ್ರಿಯೆಗಳಿಗೆ ಸಂಬಂಧಿಸಿದವು. ಈ ಲೇಖನಗಳಿಂದ ಐನ್ಸ್ಟೈನ್ ಜಗದ್ವಿಖ್ಯಾತನಾದ. ಇವುಗಳಿಂದ ಅವನಿಗೆ ಲಭಿಸಿದ ಗೌರವ ಪರಂಪರೆಗಳಲ್ಲಿ ಹೆಸರಾಂತವು-ಜೂ಼ರಿಕ್ ವಿಶ್ವವಿದ್ಯಾನಿಲಯ ನೀಡಿದ ಡಾಕ್ಟರೇಟ್ ಪದವಿ ಮತ್ತು 1910-11ರಲ್ಲಿ ಅದೇ ವಿಶ್ವವಿದ್ಯಾನಿಲಯ ನೀಡಿದ ಭೌತವಿಜ್ಞಾನ ಪ್ರಾಧ್ಯಾಪಕತ್ವದ ಆಹ್ವಾನ. ಐನ್ಸ್ಟೈನ್ ಇದನ್ನು ಸ್ವೀಕರಿಸಿದ. 1911ರಲ್ಲಿ ವಿಸ್ತೃತ ಸಾಪೇಕ್ಷ ಸಿದ್ಧಾಂತದ (ಜನರಲ್ ರಿಲೆಟಿವಿಟಿ) ಮೊದಲ ಹಂತವೆಂದು ಪರಿಗಣಿಸಬಹುದಾದ ಗುರುತ್ವತೂಕ ಮತ್ತು ಜಡತ್ವತೂಕಗಳ ಸಾಮ್ಯಕ್ಕೆ ಸಂಬಂಧಿಸಿದಂತೆ ಒಂದು ಮುಖ್ಯ ಲೇಖನವನ್ನು ಪ್ರಕಟಿಸಿದ. 1914ರಲ್ಲಿ ಅಂದರೆ ಮೊದಲ ಮಹಾಯುದ್ಧ ಪ್ರಾರಂಭಕ್ಕೆ ಸ್ವಲ್ಪ ಮುಂಚೆ ಬರ್ಲಿನ್ನಿನ ಪ್ರಷ್ಯನ್ ವಿಜ್ಞಾನ ಅಕಾಡೆಮಿ ಐನ್ಸ್ಟೈನನನ್ನು ಅದರ ಭೌತವಿಜ್ಞಾನ ಸಂಸ್ಥೆಯ ನಿರ್ದೇಶಕನನ್ನಾಗಿ ನೇಮಿಸಿ ಅವನಿಗೆ ಆಹ್ವಾನವನ್ನು ಕಳುಹಿಸಿತು. ಅದನ್ನು ಸ್ವೀಕರಿಸಿದ ಅವನು ಬರ್ಲಿನ್ ನಗರವನ್ನು ಸೇರಿದ. ಇಲ್ಲಿ ಅವನ ಸಂಶೋಧನೆಗಳು ಮುಂದುವರಿದುವು. ವಿಸ್ತೃತ ಸಾಪೇಕ್ಷಸಿದ್ಧಾಂತಕ್ಕೆ ಸಂಬಂಧಿಸಿದ ಲೇಖನಗಳನ್ನು 1915-16 ರಲ್ಲಿಯೂ ವ್ಯಾಪಕವಾದ ಈ ಸಿದ್ಧಾಂತದಿಂದ ವಿಶ್ವ ರಚನೆ ಮತ್ತು ಸ್ವರೂಪಕ್ಕೆ ಸಂಬಂಧಪಟ್ಟಂತೆ ಲಭಿಸುವ ತೀರ್ಮಾನಗಳನ್ನು 1917ರಲ್ಲಿಯೂ ಪ್ರಕಟಿಸಿದ.
ಬರ್ಲಿನ್ ನಗರಕ್ಕೆ ಬಂದು ನೆಲೆಸಿದ ತರುವಾಯವೂ ಐನ್ಸ್ಟೈನನ ದಾಂಪತ್ಯ ಜೀವನ ಸುಖಮಯವಾಗಿರಲಿಲ್ಲ. ಮನೆಯ ವಾತಾವರಣ ಇನ್ನಷ್ಟು ಕಹಿಯಾಯಿತು. ಬೇರೆ ಮಾರ್ಗವಿಲ್ಲದೆ 1919ರಲ್ಲಿ ಮೊದಲ ವಿವಾಹವನ್ನು ವಿಚ್ಛೇದಿಸಿ ಅದೇ ವರ್ಷ ತನ್ನ ಸೋದರಮಾವನ ಮಗಳಾದ ಎಲ್ಲಾಳನ್ನು ಮದುವೆಯಾದ.

ಮೊದಲನೆಯ ಮಹಾಯುದ್ಧ ಮುಗಿಯಿತು. ಸಾರಿಗೆ ಸಂಪರ್ಕ ಸುಗಮವಾದದ್ದರಿಂದ ಐನ್ಸ್ಟೈನ್ ಬ್ರಿಟನ್ ಮತ್ತು ಅಮೆರಿಕ ದೇಶಗಳಿಗೆ ಭೇಟಿಯಿತ್ತು ಬರ್ಲಿನಿಗೆ ಮರಳಿದ. ಈ ವೇಳೆಗಾಗಲೇ ಆತನ ಕೀರ್ತಿ ಎಲ್ಲೆಲ್ಲಿಯೂ ಹರಡಿ ಅವನಿಗೆ ಅನೇಕ ರೀತಿಯ ಅಧಿಕ ಗೌರವ ಮನ್ನಣೆಗಳು ದೊರೆತವು. ದ್ಯುತಿ ವಿದ್ಯುತ್ಕ್ರಿಯೆ ಮತ್ತು ತಾತ್ತ್ವಿಕ ಭೌತವಿಜ್ಞಾನಗಳಿಗೆ ಸಂಬಂಧಿಸಿದ ಆತನ ಸಂಶೋಧನೆಗಳನ್ನು ಗಮನಿಸಿದ ಸ್ವೀಡಿಷ್ ರಾಯಲ್ ವಿಜ್ಞಾನ ಸಂಸ್ಥೆ 1921ರಲ್ಲಿ, ವಿಜ್ಞಾನಪ್ರಪಂಚದಲ್ಲಿ ಅತ್ಯಂತ ಗೌರವಪುರ್ವಕವಾದ ನೊಬೆಲ್ ಪಾರಿತೋಷಕವನ್ನು ನೀಡಿತು. ಮರುವರ್ಷ ಲೀಗ್ ಆಫ್ ನೇಷನ್ಸ್‌ ಸಂಸ್ಥೆಯ ಬೌದ್ಧಿಕ ಸಹಕಾರ ಸಂಘದ ಸದಸ್ಯನಾಗಿ ಚುನಾವಣೆಗೊಂಡ.

ಯೆಹೂದಿಗಳಿಗೆ ಪವಿತ್ರವಾದ ಪ್ಯಾಲೆಸ್ಟೈನ್ ದೇಶವನ್ನು ಐನ್ಸ್ಟೈನ್ ಸಂದರ್ಶಿಸಿದ್ದು 1922ರಲ್ಲಿ. ಅಲ್ಲಿನ ಪರಿಸ್ಥಿತಿಗಳ ಪರಿಶೀಲನೆಯಿಂದ ಅಲ್ಲೊಂದು ಯೆಹೂದಿ ರಾಷ್ಟ್ರವನ್ನು ಸ್ಥಾಪಿಸುವುದೇ ವಿಶ್ವ ಯೆಹೂದಿ ಪ್ರಶ್ನೆಗೆ ಸರಿಯಾದ ಪರಿಹಾರವೆಂಬ ತೀರ್ಮಾನಕ್ಕೆ ಬಂದ. ಸಹಜವಾಗಿಯೇ ಈ ಗುರಿಯನ್ನು ಸಾಧಿಸಲು ಹೋರಾಡುತ್ತಿದ್ದ ಸಯೋನಿಸ್ಟ್‌ ಚಳವಳಿಗೆ ತನ್ನ ಬೆಂಬಲ ನೀಡಿದ. ಆದರೆ ಈ ಯೆಹೂದಿ ರಾಷ್ಟ್ರ ಯಾವ ರೀತಿಯ ಸಂಕುಚಿತ ಭಾವನೆಯನ್ನೂ ಹೊಂದಿರಬಾರದು, ಪ್ಯಾಲಿಸ್ಟೈನ್ ಅರಬ್ಬರಿಗೂ ಈ ರಾಷ್ಟ್ರಗಳಲ್ಲಿ ಸಮಾನಸ್ಥಾನವಿರಬೇಕು, ಯೆಹೂದಿಗಳು ಮತ್ತು ಅರಬ್ಬರು ಸೌಹಾರ್ದದಿಂದ ಒಟ್ಟಿಗೆ ಬಾಳಬೇಕು-ಎಂಬ ತನ್ನ ಖಚಿತ ಅಭಿಪ್ರಾಯಗಳನ್ನು ಚಳವಳಿಯ ಮುಖಂಡನಾದ ವೀಸ್ಮನನಿಗೆ ಸ್ಪಷ್ಟವಾಗಿ ತಿಳಿಸಿದ. ಇದೇ ಅಭಿಪ್ರಾಯಗಳನ್ನು ಅನೇಕ ಸಾರ್ವಜನಿಕ ಸಭೆಗಳಲ್ಲೂ ವ್ಯಕ್ತಪಡಿಸಿದ.

ವಿಸ್ತೃತ ಸಾಪೇಕ್ಷಸಿದ್ಧಾಂತ ಅಸ್ತಿತ್ವಕ್ಕೆ ಬಂದು ಅನೇಕ ರೀತಿಯಲ್ಲಿ ಸಮರ್ಥಿತವಾದ ಮೇಲೆ ಐನ್ಸ್ಟೈನ್ ತನ್ನ ಸಂಶೋಧನೆಗಳನ್ನು ಮುಂದುವರಿಸಿ ಸಮಗ್ರ ಅಥವಾ ಏಕೀಕೃತ ಕ್ಷೇತ್ರಸಿದ್ಧಾಂತವನ್ನು ನಿರ್ಮಿಸುವ ಪ್ರಯತ್ನಗಳನ್ನು ಕೈಗೊಂಡ. ಈ ದಿಕ್ಕಿನಲ್ಲಿ ಸಂಶೋಧನೆಗಳೇನೊ ಮುಂದುವರಿಯುತ್ತಿದ್ದುವು. ಆದರೆ ದೇಶದಲ್ಲಿ ನಾಜಿ಼ಗಳ ದೌರ್ಜನ್ಯ ಮತ್ತು ಹಿಂಸಾಕೃತ್ಯಗಳ ವಿರೋಧಿಗಳ ಬಗ್ಗೆ ಅವರ ಅಪಪ್ರಚಾರ, ಯೆಹೂದಿಗಳ ಬಗ್ಗೆ ದ್ವೇಷ ಇವೆಲ್ಲ ದಿನೇ ದಿನೇ ಹೆಚ್ಚುತ್ತ ಬಂದು ರಾಜಕೀಯ ವಾತಾವರಣ ಬಲುಮಟ್ಟಿಗೆ 
ಹದಗೆಟ್ಟಿತು. ವಿಶ್ವವಿದ್ಯಾನಿಲಯಗಳಲ್ಲಿ ಕೂಡ ಬೌದ್ಧಿಕ ವಾತಾವರಣ ಬಲುಮಟ್ಟಿಗೆ ಕಲುಷಿತವಾಯಿತು. 1930-32 ಅಮೆರಿಕಕ್ಕೆ ಎರಡು ಸಲ ಭೇಟಿಕೊಟ್ಟು ಹಿಂತಿರುಗಿದ ಅನಂತರ ಇನ್ನು ಹೆಚ್ಚು ಕಾಲ ಜರ್ಮನಿಯಲ್ಲಿ ತಾನಿರುವುದು ಸಾಧ್ಯವಿಲ್ಲ, ಹಾಗೆ ಇರುವುದು ಕ್ಷೇಮಕರವೂ ಅಲ್ಲ ಎಂಬುದು ಸ್ಪಷ್ಟವಾಯಿತು. ಭಾರವಾದ ಹೃದಯದಿಂದ ಜರ್ಮನಿ ದೇಶವನ್ನು ತೊರೆಯಬೇಕಾಯಿತು. ಆಗ ಐನ್ಸ್ಟೈನನನ್ನು ಪ್ರೀತಿವಿಶ್ವಾಸಗಳಿಂದ ಸ್ವಾಗತಿಸಿದ್ದು (1935) ಅಮೆರಿಕ ದೇಶ. ಅಲ್ಲಿನ ವಿಜ್ಞಾನಿಗಳು ಮತ್ತು ಸರ್ಕಾರ ಈತನನ್ನು ಬಹಳ ಗೌರವದಿಂದ ಬರಮಾಡಿಕೊಂಡರು. ಪ್ರಿನ್ಸ್‌ಟನ್ನಿನಲ್ಲಿರುವ ಪ್ರೌಢವ್ಯಾಸಂಗ ಸಂಸ್ಥೆಯ ಆಜೀವಾಂತ ಸದಸ್ಯನಾಗಿ ಈತನನ್ನು ನೇಮಿಸಿದ್ದು ಮಾತ್ರವಲ್ಲ, ಸಂಶೋಧನೆಯನ್ನು ಮುಂದುವರಿಸಲು ಬೇಕಾಗುವ ಸಕಲ ಸೌಕರ್ಯಗಳನ್ನೂ ಒದಗಿಸಿಕೊಟ್ಟರು. ಪ್ರತಿಭೆಯ ವಿಕಾಸ ನಿರ್ವಿಘ್ನವಾಗಿ ಮುಂದುವರಿಯಲು ಅವಕಾಶ ಒದಗಿತು. ಐನ್ಸ್ಟೈನನ ಉಳಿದ ಜೀವನಾವಧಿ ಕಳೆದದ್ದು ಇಲ್ಲಿಯೇ. 1940ರಲ್ಲಿ ಈತನನ್ನು ಅಮೆರಿಕ ದೇಶ ತನ್ನ ಪ್ರಜೆಯಾಗಿ ಸ್ವೀಕರಿಸಿತು.

ಈ ಮಧ್ಯೆ 1939ನೆಯ ಸೆಪ್ಟೆಂಬರಿನಲ್ಲಿ ಎರಡನೆಯ ಮಹಾಯುದ್ಧ ಪ್ರಾರಂಭವಾಯಿತು. ಇಷ್ಟರಲ್ಲೇ ಯುರೋಪಿನ ಅನೇಕ ಪ್ರಮುಖ ವಿಜ್ಞಾನಿಗಳು ನಾಜಿ ಮತ್ತು ಫಾಸಿಸ್ಟ್‌ ದೌರ್ಜನ್ಯಗಳಿಂದ ತಪ್ಪಿಸಿಕೊಂಡು ಅಮೆರಿಕದಲ್ಲಿ ಬಂದು ನೆಲೆಸಿದರು. ಇವರು ಮತ್ತು ಅಮೆರಿಕದ ಕೆಲವು ಪ್ರಮುಖ ವಿಜ್ಞಾನಿಗಳು ಅಂದಿನ ಅಂತಾರಾಷ್ಟ್ರೀಯ ಪರಿಸ್ಥಿತಿಯನ್ನು ಗಮನಿಸಿ ಎಲ್ಲ ದೃಷ್ಟಿಯಿಂದಲೂ ಅಮೆರಿಕ ದೇಶ ಪರಮಾಣುಬಾಂಬು ತಯಾರಿಕೆಯ ದಿಕ್ಕಿನಲ್ಲಿ ಪ್ರಯತ್ನವನ್ನು ಪ್ರಾರಂಭಿಸುವುದು ಒಳ್ಳೆಯದೆಂಬ ತೀರ್ಮಾನಕ್ಕೆ ಬಂದರು. ತಮ್ಮ ಸಲಹೆಗಳ ಪರವಾಗಿ ಅಧ್ಯಕ್ಷ ರೂಸ್ವೆಲ್ಟ್‌ರವರಿಗೆ ಐನ್ಸ್ಟೈನ್ ಕಾಗದ ಬರೆಯುವಂತಾದರೆ ತಮ್ಮ ಪ್ರಯತ್ನ ಸಫಲವಾಗುವುದೆಂದು ಫರ್ಮಿ, ಸಿಲಾರ್ಡ್, ಟೆಲ್ಲರ್ ಮುಂತಾದ ಅನೇಕ ಪ್ರಮುಖ ವಿಜ್ಞಾನಿಗಳು ಭಾವಿಸಿದರು. ತಮ್ಮ ಸಲಹೆಗಳನ್ನು ಐನ್ಸ್ಟೈನನಿಗೆ ವಿವರಿಸಿ ಈ ಬಗ್ಗೆ ಅಧ್ಯಕ್ಷರಿಗೆ ತಮ್ಮೆಲ್ಲರ ಪರವಾಗಿ ಕಾಗದವೊಂದನ್ನು ಬರೆಯಬೇಕೆಂದು ಮನವಿ ಮಾಡಿಕೊಂಡಾಗ ಸ್ವಭಾವತಃ ಶಾಂತಿಪ್ರಿಯ ಹಾಗೂ ಶಾಂತಿವಾದಿಯಾದ ಈತ ಒಂದು ಧರ್ಮಸಂಕಟದ ಪರಿಸ್ಥಿತಿಯನ್ನು ಎದುರಿಸಬೇಕಾಯಿತು. ಆದರೆ ಅಂದಿನ ಸಮಯ ಸಂದರ್ಭಗಳನ್ನೆಲ್ಲ ಕೂಲಂಕಷವಾಗಿ ಪರ್ಯಾಲೋಚಿಸಿ ಪರಮಾಣು ಬಾಂಬು ತಯಾರಿಕೆ ಪ್ರಯತ್ನವನ್ನು ಅಮೆರಿಕ ಕೈಗೊಳ್ಳುವುದು ಎಲ್ಲ ಜನರ ಹಿತ ದೃಷ್ಟಿಯಿಂದಲೂ ಸರಿ ಎಂಬ ತೀರ್ಮಾನಕ್ಕೆ ಆತ ಬಂದ. ಇದಲ್ಲದಿದ್ದರೆ ನಾಜಿ಼ ಜರ್ಮನಿ ಈ ಸಿದ್ಧಿ ಪಡೆಯುವುದು ನಿಶ್ಚಯ, ಇದರಿಂದ ಪ್ರಪಂಚವಿನಾಶ ಕಟ್ಟಿಟ್ಟದ್ದು ಎಂಬುದು ಆತನ ಮನಸ್ಸಿನ ಹಿನ್ನೆಲೆಯಲ್ಲಿದ್ದ ಭಾವ. ವಿಜ್ಞಾನಿಗಳ ಪರವಾಗಿ ಅಧ್ಯಕ್ಷ ರೂಸ್ವೆಲ್ಟರಿಗೆ ಕಾಗದ ಬರೆದು ಬಹುಶಃ ಈಗಾಗಲೇ ಜರ್ಮನಿ ಈ ದಿಕ್ಕಿನಲ್ಲಿ ಪ್ರಯತ್ನಗಳನ್ನು ಕೈಗೊಂಡು ಮುಂದುವರಿದಿರಬಹುದೆಂದೂ ಅಮೆರಿಕ ಯೋಗ್ಯ  ಪ್ರಯತ್ನಗಳನ್ನು ಕೈಗೊಳ್ಳದಿದ್ದಲ್ಲಿ ಮುಂದೆ ವಿಪರೀತ ಅನಾಹುತಕ್ಕೆ ಎಡೆಯಾಗುವುದೆಂದೂ ಸ್ಪಷ್ಟವಾಗಿ ತಿಳಿಸಿದ.

ಈ ಕಾಗದವನ್ನು ಅಪಾರ್ಥಮಾಡಿಕೊಂಡ ಅನೇಕರು ಐನ್ಸ್ಟೈನನನ್ನು ಬಲುಕಟುವಾಗಿ ಟೀಕಿಸಿ ಪರಮಾಣು ಬಾಂಬಿನ ತಯಾರಿಕೆಯ ನೈತಿಕ ಜವಾಬ್ದಾರಿ ಆತನದೇ ಎಂದು ತೀವ್ರ ವಾಗಿ ದೂಷಿಸಿದ್ದಾರೆ. ಈ ಟೀಕೆಗಳಿಗೆ ಉತ್ತರವಾಗಿ ಜಪಾನ್ ದೇಶದ ಪತ್ರಿಕಾ ಸಂಪಾದಕ ರೊಬ್ಬರಿಗೆ ಬರೆದ ಪತ್ರದಲ್ಲಿ ಐನ್ಸ್ಟೈನ್ ತನ್ನ ನಿಲುವನ್ನು ಸ್ಪಷ್ಟಪಡಿಸಿದ್ದಾನೆ. ಶಾಂತಿಸ್ಥಾಪನೆ ಮತ್ತು ಶಾಂತಿಪಾಲನೆಯಲ್ಲಿ ತನಗೆ ಅಚಲವಾದ ನಂಬಿಕೆ ಇರುವುದಾದರೂ ಜನಜೀವನವನ್ನೇ ಹಾಳು ಮಾಡುವ ದುರುದ್ದೇಶವುಳ್ಳ ರಾಕ್ಷಸೀಬಲಗಳನ್ನು ಎದುರಿಸುವಾಗ ಎಲ್ಲ ವಿಧವಾದ ಅಸ್ತ್ರಗಳನ್ನೂ ಬಳಸುವುದು ಅನಿವಾರ್ಯವೆಂಬ ಅಂಶ ಆ ಪತ್ರದಲ್ಲಿ ನಿರೂಪಿತವಾಗಿದೆ.

ಪ್ರಿನ್ಸ್‌ಟನ್ನಿನ ಪ್ರಶಾಂತ ಬೌದ್ಧಿಕ ವಾತಾವರಣದಲ್ಲಿ ಐನ್ಸ್ಟೈನನ ಸಂಶೋಧನೆ ಮತ್ತು ಚಿಂತನೆಗಳು ಮುಂದುವರಿದುವು. ಏಕೀಕೃತ ಕ್ಷೇತ್ರಸಿದ್ಧಾಂತವೊಂದನ್ನು ನಿರ್ಮಿಸುವ ಆಶಯದಿಂದ 1920ರಲ್ಲೇ ಪ್ರಾರಂಭಿಸಿದ್ದ ಪ್ರಯತ್ನಗಳನ್ನು ಮುಂದುವರಿಸಿ 1949ರಲ್ಲಿ ಹೊಸ ಏಕೀಕೃತ ಕ್ಷೇತ್ರಸಿದ್ಧಾಂತವನ್ನು ಪ್ರಕಟಿಸಿದ. ಈ ಸಿದ್ಧಾಂತವನ್ನು ಪುನಃ ಪರಿಷ್ಕರಿಸಿ ಪರಿಷ್ಕೃತ ಸಿದ್ಧಾಂತವನ್ನು 1952ರಲ್ಲಿ ಪ್ರಕಟಿಸಿದ. ಇದು ಅತಿ ಕ್ಲಿಷ್ಟವಾದ ಸಿದ್ಧಾಂತ. ಇದನ್ನು ಈವರೆಗೂ ಪುರ್ಣವಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಎಲ್ಲ ವಿಧವಾದ ಮೂಲ ಘಟನೆಗಳನ್ನೂ ವಿವರಿಸಬಹುದಾದ ಏಕೈಕ ಸಮಗ್ರ ಸಿದ್ಧಾಂತವನ್ನು ನಿರ್ಮಿಸುವುದು ಅಗತ್ಯ ಮತ್ತು ಸಾಧ್ಯ ಎಂದು ನಂಬಿದ್ದ ಐನ್ಸ್ಟೈನ್ ಕೊನೆಯವರೆಗೂ ತನ್ನ ಪ್ರಯತ್ನವನ್ನು ಮುಂದುವರಿಸಿದ. ಆದರೆ ಇದು ಸಫಲವಾಗುವ ಮುನ್ನವೇ ವಿಧಿವಶನಾದ (1955). ಅಂದು ಅರ್ಧ ಶತಮಾನಕಾಲ ಸತತವಾಗಿ ಸತ್ಯಾನ್ವೇಷಣೆಯಲ್ಲಿ ತೊಡಗಿ ಇತರರಿಗೆ ಮಾರ್ಗದರ್ಶಿಯಾಗಿದ್ದ ಮಹಾಚೇತನವೊಂದು ಕಣ್ಮರೆಯಾಯಿತು. 

 ಬೌದ್ಧಿಕ ಜೀವನ ಹಾಗೂ ಸಾಧನೆ 
ಐನ್ಸ್ಟೈನನ ಕ್ಷೇತ್ರ ತಾತ್ತ್ವಿಕ ಭೌತಶಾಸ್ತ್ರವಿಜ್ಞಾನಕ್ಕೇ ಬಹು ಪಾಲು ಮೀಸಲು. ಆದರೆ ಆತನ ಕುತೂಹಲಕ್ಕೆ ಮೇರೆ ಇರಲಿಲ್ಲ. ವಿಜ್ಞಾನ ಮೀಮಾಂಸೆ, ರಾಜಕೀಯ ಮತ್ತು ಧಾರ್ಮಿಕ ಪ್ರಶ್ನೆಗಳು, ಯೆಹೂದಿ ಪ್ರಶ್ನೆ, ನಿಶ್ಯಸ್ತ್ರೀಕರಣ, ಶಾಂತಿಸ್ಥಾಪನೆ, ವಿಶ್ವಸರ್ಕಾರ, ಜೀವನದರ್ಶನ- ಇವೆಲ್ಲ ವಿಚಾರಗಳಲ್ಲಿಯೂ ಆಳವಾಗಿ ಚಿಂತಿಸಿ ಖಚಿತ ಅಭಿಪ್ರಾಯಗಳನ್ನು ಆತ ತಳೆದಿದ್ದನಲ್ಲದೆ ಯುಕ್ತಕಂಡಲ್ಲಿ ಅವನ್ನು ವ್ಯಕ್ತಪಡಿಸಿಯೂ ಇದ್ದ.

ಐನ್ಸ್ಟೈನನ ಮುಖ್ಯ ಕೊಡುಗೆ ಸಾಪೇಕ್ಷಸಿದ್ಧಾಂತ ಮತ್ತು ಅದರ ಬೆಳೆವಣಿಗೆ. ಆದರೆ ಶಕಲಸಿದ್ಧಾಂತದ (ಕ್ವಾಂಟಂ ಥಿಯೊರಿ) ಪ್ರಾರಂಭದ ದೆಸೆಯಲ್ಲಿ ಈತ ಅದರಲ್ಲಿ ಸಾಕಷ್ಟು ಭಾಗವಹಿಸಿದ್ದ. ಹಾಗಿದ್ದರೂ 1925ರ ಅನಂತರ ಹೈಸನ್ಬರ್ಗನ ಅನಿಶ್ಚಿತತ್ವ ನಿಯಮದ ಆಧಾರದ ಮೇಲೆ ಬೆಳೆದ ಹೊಸ ಶಕಲ ಸಿದ್ಧಾಂತದ ಬಗ್ಗೆ ಈತನಿಗೆ ಅಷ್ಟಾಗಿ ಸಹಾನುಭೂತಿ ಇರಲಿಲ್ಲ. ಅದರಲ್ಲಿಯೂ ಈ ಸಿದ್ಧಾಂತದ ಸಂಭವನೀಯಾತ್ಮಕ ವಿವರಣೆ ಮತ್ತು ವ್ಯಾಖ್ಯೆಗಳಲ್ಲಿ ಸ್ವಲ್ಪವೂ ನಂಬಿಕೆ ಇರಲಿಲ್ಲ. ಇದೊಂದು ಕೇವಲ ತಾತ್ಕಾಲಿಕ ಪರಿಹಾರ ಎಂದೇ ಈತನ 
ನಂಬಿಕೆಯಾಗಿತ್ತು. ಈ ಸಿದ್ಧಾಂತ ಮತ್ತು ಇತರ ಮೂಲ ಸಿದ್ಧಾಂತಗಳನ್ನು ಒಳಗೊಂಡ ಒಂದು ಸಮಗ್ರ ಕ್ಷೇತ್ರಸಿದ್ಧಾಂತದ ನಿರ್ಮಾಣ ಅಗತ್ಯ ಮತ್ತು ಸಾಧ್ಯ, ಈ ಸಮಗ್ರ ಸಿದ್ಧಾಂತ ಸಂಭವನೀಯಾತ್ಮಕವಾಗಿರದೆ, ನಿರ್ಣಯಾತ್ಮಕವಾಗಿಯೇ ಇರುತ್ತದೆ ಎಂದು ಐನ್ಸ್ಟೈನನ ದೃಢ ನಂಬಿಕೆ.

ವಿಜ್ಞಾನ ಮೀಮಾಂಸೆಯ ಮುಖ್ಯ ಭಾಗಗಳಲ್ಲೊಂದಾದ ವಿಜ್ಞಾನದ ವಿಚಾರ ಮಾರ್ಗದ ಬಗ್ಗೆ ಐನ್ಸ್ಟೈನ್ ತನ್ನ ಅಭಿಪ್ರಾಯವನ್ನು ಸ್ಪಷ್ಟವಾಗಿ ತಿಳಿಸಿದ್ದಾನೆ. ವಿಜ್ಞಾನದ ಬೆಳೆವಣಿಗೆ ಮತ್ತು ಸ್ವರೂಪಗಳನ್ನು ಗಮನಿಸಿದರೆ ವೈಜ್ಞಾನಿಕ ಸಿದ್ಧಾಂತಗಳಿಗೆ ಅನುಭವಲಭ್ಯ ವಿಷಯಗಳೇ ಅಲ್ಲದೆ ಕೆಲವು ಮೂಲ ಪರಿಕಲ್ಪನೆ ಮತ್ತು ಮೂಲಭಾವನೆಗಳು ಆಧಾರವಾಗಿರುವುದು ಕಂಡುಬರುತ್ತದೆ. ಐನ್ಸ್ಟೈನನ ಪ್ರಕಾರ ಈ ಪರಿಕಲ್ಪನೆ ಮತ್ತು ಭಾವನೆಗಳು ತಾರ್ಕಿಕದೃಷ್ಟಿಯಿಂದ ಅತಿಸರಳವಾಗಿಯೂ ಪರಸ್ಪರ ಸಮಂಜಸವಾಗಿಯೂ ಇರಬೇಕು. ಇವನ್ನು ಯಾವ 
ರೀತಿಯಿಂದಲೂ ಇಂದ್ರಿಯಗೋಚರ ವಿಷಯಗಳಿಂದ ಉತ್ಪತ್ತಿಸುವುದು ಸಾಧ್ಯವಿಲ್ಲ. ವಿಜ್ಞಾನಿ ತನ್ನ ಬುದ್ಧಿ ಮತ್ತು ಪ್ರತಿಭಾಶಕ್ತಿಯಿಂದ ಇವನ್ನು ಅನಿರ್ಬಂಧಿತವಾಗಿ ಸೃಜಿಸುತ್ತಾನೆ. ಆದರೆ ಇವು ಭಾವನೆಗಳಾಗಿ ಯಥಾರ್ಥ ಜ್ಞಾನವನ್ನು ನೀಡಲು ಸಹಾಯಕಾರಿಯಾಗಬೇಕಾದರೆ ವಾಸ್ತವವಿಷಯಗಳೊಂದಿಗೆ ಸಂಬಂಧ ಪಡೆಯಬೇಕು; ಈ ಸಂಬಂಧದ ಅರಿವು ನಮ್ಮ ಪ್ರಜ್ಞೆಗೆ ಸ್ವಯಂಗೋಚರವಾಗುತ್ತದೆಯೇ ವಿನಾ ತಾರ್ಕಿಕ ತೀರ್ಮಾನವಾಗಿ ಲಭಿಸುವುದಿಲ್ಲ. ಈ ಭಾವನೆಗಳ ಯಥಾಥರ್ಯ್‌ಕ್ಕೆ ಈ ಸಂಬಂಧವೊಂದೇ ಸಾಲದು. ಇವು ಯಾವ ರೀತಿಯಲ್ಲೂ ಅನುಭವಸಿದ್ಧವಾದ ಯಥಾರ್ಥ ವಿಷಯಗಳಿಗೆ ವಿರೋಧವಾಗಿರಬಾರದು ಮತ್ತು ಇವುಗಳಿಂದ ಲಭಿಸುವ ತೀರ್ಮಾನಗಳು ಅನುಭವ ಸಮರ್ಥನೀಯವಾಗಿರಬೇಕು.

ಸಾಮಾನ್ಯವಾಗಿ ಬಹುತೇಕ ವಿಜ್ಞಾನಿಗಳು ರಾಜಕೀಯ ಮತ್ತು ಸಾಮಾಜಿಕ ವ್ಯವಹಾರಗಳಿಂದ ದೂರವಿರುವುದನ್ನು ಕಾಣುತ್ತೇವೆ. ಐನ್ಸ್ಟೈನನ ಅಭಿಪ್ರಾಯದಲ್ಲಿ ವಿಜ್ಞಾನಿಗಳು ಮತ್ತು ಇತರ ಬುದ್ಧಿಜೀವಿಗಳು ಈ ವ್ಯವಹಾರಗಳಲ್ಲಿ ನೇರವಾಗಿ ಭಾಗವಹಿಸದಿದ್ದರೂ ಇವುಗಳ ಬಗ್ಗೆ ಆಲೋಚಿಸಿ ನಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವುದು ಅಗತ್ಯ ಎಂದಿತ್ತು. ಲೇಖನ ಮತ್ತು ಸಾರ್ವಜನಿಕ ಭಾಷಣಗಳ ಮೂಲಕ ರಾಜಕೀಯ ಮತ್ತು ಸಾಮಾಜಿಕ ಪ್ರಶ್ನೆಗಳ ಬಗ್ಗೆ ತನ್ನ ಅಭಿಪ್ರಾಯಗಳನ್ನು ಐನ್ಸ್ಟೈನ್ ವ್ಯಕ್ತಪಡಿಸುತ್ತಿದ್ದ. ಚಿಕ್ಕಂದಿನಿಂದಲೂ ಸಮಾಜದ ದರಿದ್ರ 
ಮತ್ತು ಶೋಷಿತ ವರ್ಗಗಳ ಬಗ್ಗೆ ಆತನಿಗೆ ಒಂದು ವಿಧವಾದ ಸಹಜ ಅನುಕಂಪವಿತ್ತು. ಸಮಾಜದಲ್ಲಿ ವರ್ಗವರ್ಗಗಳಿಗಿರುವ ಅಂತರ ಭೇದಭಾವನೆಗಳು, ಆರ್ಥಿಕ ಮತ್ತು ಸಾಮಾಜಿಕ ಶೋಷಣೆ-ಇವನ್ನು ಆತ ಸರ್ವಥಾ ಸಹಿಸುತ್ತಿರಲಿಲ್ಲ. ರಷ್ಯಾದಲ್ಲಿ ಕಮ್ಯೂನಿಸಂ ತತ್ತ್ವಗಳಿಗನುಸಾರವಾಗಿ ಸ್ಥಾಪಿತವಾದ ಸಮತಾವಾದಿ ಸಮಾಜ ವ್ಯವಸ್ಥೆಯನ್ನು ಆತ ಒಪ್ಪಲಿಲ್ಲ. ಒಂದು ರೀತಿಯ ಪ್ರಜಾಸತ್ತಾತ್ಮಕ ಸಮತಾವಾದದಲ್ಲಿ ಅವನಿಗೆ ನಂಬಿಕೆ ಇತ್ತು; ನೈತಿಕದೃಷ್ಟಿಯಿಂದ ಈ ವಾದ ಅತಿ ಸಮರ್ಥನೀಯವೆಂದು ಭಾವಿಸಿದ್ದ. ಪ್ರತಿಯೊಬ್ಬನಿಗೂ ಕನಿಷ್ಠ ಜೀವನಸೌಲಭ್ಯಗಳನ್ನು ಒದಗಿಸುವುದು ಸಮಾಜದ ಹೊಣೆ, ಅವನವನ ಶಕ್ತಿಸಾಮಥಾರ್ಯ್‌ನುಸಾರ ವ್ಯಕ್ತಿತ್ವದ ಬೆಳೆವಣಿಗೆಗೆ ಪ್ರತಿಯೊಬ್ಬನಿಗೂ ಅವಕಾಶವಿರಬೇಕು; ಅವನ ಮೂಲಹಕ್ಕುಗಳನ್ನು ಯಾವ ವಿಧದಲ್ಲೂ ಕುಂಠಿತಮಾಡದೆ ಅವನ್ನು ಸಂರಕ್ಷಿಸುವುದು ಸಮಾಜ ಮತ್ತು ಸರ್ಕಾರದ ಕರ್ತವ್ಯ ಎಂದು ಅನೇಕ ಸಂದರ್ಭಗಳಲ್ಲಿ ಅವನ್ನು ಶ್ರುತಪಡಿಸುವುದಿತ್ತು. ಪ್ರತಿಯೊಬ್ಬ ವ್ಯಕ್ತಿಗೂ ಎಲ್ಲ ವಿಧವಾದ ಸ್ವಾತಂತ್ರ್ಯ, ಅದರಲ್ಲೂ ಅವನಿಗೆ ಇಷ್ಟ ಬಂದ ಕ್ಷೇತ್ರದಲ್ಲಿ ಅನ್ವೇಷಣೆ ಮಾಡಲು ಮತ್ತು ಅನ್ವೇಷಣೆಯ ತೀರ್ಮಾನಗಳನ್ನು ಅಭಿವ್ಯಕ್ತಪಡಿಸಲು, ಸಂಪುರ್ಣ ಬೌದ್ಧಿಕ ಸ್ವಾತಂತ್ರ್ಯವಿರಬೇಕೆಂಬುದು ಈತನ ಬಲು ಖಚಿತವಾದ ನಿಲುವು. ಆದ್ದರಿಂದ ವ್ಯಕ್ತಿಸ್ವಾತಂತ್ರ್ಯ ವಿರೋಧಿಗಳಾದ ಇಟಲಿ ದೇಶದ ಫ್ಯಾಸಿಸ್ಟ್‌ ಮತು ಜರ್ಮನಿಯ ನಾಜಿ಼ ಸರ್ಕಾರಗಳನ್ನು ಈತ ಬಲು ತೀವ್ರವಾಗಿ ಖಂಡಿಸಿದ. ಮಾನವ ಸಹೋದರತ್ವದ ಆದರ್ಶದಲ್ಲಿ ಅವನಿಗೆ ಅಪಾರ ನಂಬಿಕೆ. ಅನೇಕ ಸಂದರ್ಭದಲ್ಲಿ ಅಮೆರಿಕದ ಬಿಳಿಯ ಜನರು ನೀಗ್ರೋಗಳ ಬಗ್ಗೆ ತೋರುತ್ತಿದ್ದ ಅವಹೇಳನ ಮನೋಭಾವವನ್ನು ಸಹಿಸಲಾರದೆ ಖಂಡಿಸುತ್ತಿದ್ದ.

ಸ್ವಭಾವತಃ ಮಾನವ ಹಿತಚಿಂತಕನಾದ ಐನ್ಸ್ಟೈನನಿಗೆ ಚಿಕ್ಕಂದಿನಿಂದಲೇ ಮಿಲಿಟರಿ ಶಿಸ್ತು ಎಂದರೆ ಜುಗುಪ್ಸೆ ಮತ್ತು ವಿರೋಧ. ಎರಡು ಮಹಾಯುದ್ಧಗಳಿಂದ ಸಂಭವಿಸಿದ ಅಪಾರ ಕಷ್ಟನಷ್ಟಗಳನ್ನು ಕಣ್ಣಾರೆ ಕಂಡಮೇಲಂತೂ ಈ ಯುದ್ಧ ವಿರೋಧಿಭಾವ ಅತಿಯಾಗಿ ಬಲಗೊಂಡಿತು. ಪ್ರಪಂಚದ ಭವಿಷ್ಯ ಮತ್ತು ಎಲ್ಲ ಜನರ ಹಿತದೃಷ್ಟಿಯಿಂದ ಸಾರ್ವತ್ರಿಕ ನಿಶ್ಯಸ್ತ್ರೀಕರಣ ಅತ್ಯಗತ್ಯ; ಯುದ್ಧಸಂಭವನೆಯ ಮೂಲ ಕಾರಣಗಳನ್ನೆ ನಿರ್ಮೂಲಗೊಳಿಸಬೇಕು; ಶಾಂತಿಯನ್ನು ಸ್ಥಾಪಿಸಿ ಅದರ ಪಾಲನೆಗೆ ವಿಶ್ವಸರ್ಕಾರವನ್ನು ಸ್ಥಾಪಿಸಬೇಕು; ಎಲ್ಲ ರಾಷ್ಟ್ರಗಳೂ ಇದರ ಅಧೀನಕ್ಕೆ ಒಳಪಡಬೇಕು ಎಂದು ಅನೇಕ ಸಲ ಒತ್ತಿ ಒತ್ತಿ ತನ್ನ ಅಭಿಪ್ರಾಯಗಳನ್ನು ತಿಳಿಸಿದ. ರಾಷ್ಟ್ರರಾಷ್ಟ್ರಗಳ ನಡುವೆ ಉದ್ಭವಿಸುವ ಸಮಸ್ಯೆಗಳನ್ನು ವಿಶ್ವಸರ್ಕಾರದ ನೆರವಿನಿಂದ ಶಾಂತಿಯುತವಾಗಿ ಪರಿಹರಿಸಬೇಕು; ಇಂಥ ಸಂದರ್ಭದಲ್ಲಿ ಮಹಾತ್ಮಗಾಂಧಿ ತೋರಿಸಿಕೊಟ್ಟಿರುವ ಶಾಂತಿಮಾರ್ಗವನ್ನು ಅನುಸರಿಸುವುದು ಸೂಕ್ತವೆಂದು ವಾದಿಸಿದ. ಗಾಂಧಿ ಬಗ್ಗೆ ಐನ್ಸ್ಟೈನನಿಗೆ ಅಪಾರ ಗೌರವವಿತ್ತು.

ಐನ್ಸ್ಟೈನ್ ಜನ್ಮತಃ ಯೆಹೂದಿ. ಆದರೆ ತನ್ನ ಮತ, ಧರ್ಮ ಮತ್ತು ಆಚರಣೆಗಳಿಗೆ ಆತ ಎಂದೂ ಕಟ್ಟು ಬೀಳದೆ ಒಂದು ವಿಧವಾದ ಸ್ವತಂತ್ರ ಮನೋಭಾವವನ್ನೇ ತಳೆದಿದ್ದ. ಸದಾ ಆತ ಒಬ್ಬ ಬುದ್ಧಿಜೀವಿಯಾಗಿಯೇ ಉಳಿದ. ಹೀಗೆಂದ ಮಾತ್ರಕ್ಕೆ ಅವನು ನಾಸ್ತಿಕನಲ್ಲ. ಅವನಿಗೆ ಎಲ್ಲ ಮತಗಳ ಮೂಲ ಭಾವನೆಗಳ ಬಗ್ಗೆ ಗೌರವವಿತ್ತು. ಮತ, ಧರ್ಮ ಮತ್ತು ದೇವರು ಇವುಗಳ ಬಗ್ಗೆ ಅವನ ಕಲ್ಪನೆಯೇ ಬೇರೆ. ದೇವರು ಎಂದರೆ ಸತ್ಯ ಸೌಂದರ್ಯಗಳ ಮೂರ್ತರೂಪ ಹಾಗೂ ಆಧ್ಯಾತ್ಮಿಕ ಸ್ವರೂಪಿಯಾದ ಶಕ್ತಿ ಎಂಬುದೇ ಅವನ ಕಲ್ಪನೆ. ಈ ಶಕ್ತಿ ಅನುಭವಾತೀತವಲ್ಲ. ವಿಶ್ವ ಹಾಗು ನಮ್ಮ ಭಾವನೆಗಳಲ್ಲಿ ನಾವು ಕಾಣುವ ಅದ್ಭುತ ರಚನೆ ಮತ್ತು ಭವ್ಯತೆ ಈ ಆದಿಶಕ್ತಿಯ ಅರಿವನ್ನು ಮೂಡಿಸುತ್ತವೆ. ಇಂಥ ಅರಿವು ನಮ್ಮಲ್ಲಿ ಒಂದು ವಿಧವಾದ ಪುಜ್ಯ ಅಂದರೆ ಆಸ್ತಿಕ ಮನೋಭಾವವನ್ನು ಉಂಟು ಮಾಡುತ್ತದೆ ಎಂದು ಆತನ ನಂಬಿಕೆ. ಕೇವಲ ಭಯ ಭಾವನೆಯಿಂದಾಗಲಿ ಅಥವಾ ನೀತಿ ಸಂರಕ್ಷಣೆಗಾಗಲೀ ಹುಟ್ಟಿಕೊಂಡ ಮಾತುಗಳು ಅಷ್ಟೇನೂ ಶ್ರೇಷ್ಠವಲ್ಲ ಜೀವನದ ಪರಮಮೌಲ್ಯ ಮತ್ತು ಗುರಿಗಳ ಪ್ರಜ್ಞೆಯನ್ನು ಒದಗಿಸಿ ಅವು ನಮ್ಮ ಅಂತರಾಳದಲ್ಲಿ ರೂಢವಾಗಿ ಆತ್ಮಪರಿಶುದ್ಧತೆಯನ್ನು ಸಾಧಿಸಲು ಸಹಾಯಕವಾಗುವ ಮತವೇ ಅತಿ ಶ್ರೇಷ್ಠವೆಂದು ಅವನು ಭಾವಿಸಿದ್ದ. ಸತ್ಯಾನ್ವೇಷಣೆ, ಪರಮ ಮೌಲ್ಯಗಳ ಅರಿವು, ಜೀವನದಲ್ಲಿ ಅವುಗಳ ಸಾಧನೆಗಾಗಿ ಪ್ರಯತ್ನ-ಇದೇ ಧರ್ಮ, ಇದೇ ಆಸ್ತಿಕತೆ ಎಂದು ಅವನ ಭಾವನೆ.

ಇಂದ್ರಿಯಗೋಚರವಾದ ವಿಷಯಗಳನ್ನೆಲ್ಲ ಸುವ್ಯವಸ್ಥಿತವಾಗಿ ಒಟ್ಟುಗೂಡಿಸಿ ಅವನ್ನು ಅರ್ಥಪುರ್ಣವಾಗಿ ವಿವರಿಸುವುದೇ ವಿಜ್ಞಾನದ ಗುರಿ. ಇದನ್ನು ಸಾಧಿಸಲು ವಿಜ್ಞಾನ ಅನುಸರಿಸುವ ವಿಧಾನ ನಮಗೆ ಜೀವನದ ಪರಮಾಕಾಂಕ್ಷೆಗಳ ಅರಿವನ್ನು ಕೊಡಲು ಅಶಕ್ಯ. ಈ ಅರಿವನ್ನು ಒದಗಿಸುವ ಅನುಭವಮೂಲವೇ ಬೇರೆ ಎಂಬುದು ಐನ್ಸ್ಟೈನನ ಅಭಿಪ್ರಾಯ. ಈ ದೃಷ್ಟಿಯಿಂದ ಅವನು ವಿಜ್ಞಾನ ಮತ್ತು ಆಸ್ತಿಕತೆಗಳ ಸಂಬಂಧವನ್ನು ವಿವೇಚಿಸಿ ಅವುಗಳ ನಡುವೆ ಯಾವ ವಿಧವಾದ ತಿಕ್ಕಾಟಕ್ಕೂ ಆಸ್ಪದವಿಲ್ಲ; ಅವೆರಡೂ ಪರಸ್ಪರ ಪುರಕ;  ಎರಡನ್ನೂ ಸಂಗತಗೊಳಿಸಿ ಸಮಗ್ರಜೀವನ ದರ್ಶನವನ್ನು ರೂಪಿಸುವುದು ಸಾಧ್ಯ ಮತ್ತು ಅತ್ಯಗತ್ಯ ಎಂದು ತನ್ನ ಹಲವಾರು ಲೇಖನಗಳಲ್ಲಿ ಬರೆದಿದ್ದಾನೆ.

ಐನ್ಸ್ಟೈನ್ ತನ್ನ ಅನುಭವ, ಚಿಂತನೆ ಮತ್ತು ಅನ್ವೇಷಣೆಗಳ ಬಗ್ಗೆ ಮಾತನಾಡುತ್ತ ತನ್ನ ಇಡೀ ಜೀವನಕ್ಕೆ ಸ್ಫೂರ್ತಿಯನ್ನು ಒದಗಿಸಿ ಮಾರ್ಗದರ್ಶನ ನೀಡಿದ ಉದಾತ್ತ ಮೌಲ್ಯಗಳ ಬಗ್ಗೆ ಈ ರೀತಿ ನುಡಿದಿದ್ದಾನೆ; “ನನ್ನ ಜೀವನದ ಹಾದಿಯನ್ನು ಬೆಳಗಿಸಿ ಹಸನ್ಮುಖಿಯಾಗಿ ಮತ್ತೆ ಮತ್ತೆ ಜೀವನವನ್ನು ಎದುರಿಸಲು ಧೈರ್ಯ ತಂದುಕೊಟ್ಟ ಪರಮ ಮೌಲ್ಯಗಳೆಂದರೆ ದಯೆ, ಸೌಂದರ್ಯ ಮತ್ತು ಸತ್ಯ’. (ನೋಡಿ- ಸಾಪೇಕ್ಷತಾಸಿದ್ಧಾಂತ) 
					       (ಕೆ.ಎಸ್.ಆರ್.ಐ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ